ಬಸವನಬಾಗೇವಾಡಿ: ಮಡಿವಾಳ ಮಾಚಿದೇವ ಅವರು 12ನೇ ಶತಮಾನದ ಆದ್ಯ ವಚನಕಾರ ಮತ್ತು ವಚನಗಳ ಸಂರಕ್ಷಕ. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ ತಾಲೂಕಾ ಆಡಳಿತದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಡಿವಾಳ ಮಾಚಿದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ‘ಅವರು ಮಡಿವಾಳ ಸಮಾಜಕ್ಕೆ ಸೀಮಿತವಾದವರಲ್ಲ. ಕ್ರಾಂತಿಕಾರಿ ಬಸವಣ್ಣನ ಅನುಯಾಯಿಯಾಗಿದ್ದವರು. ಮನುಷ್ಯನು ಪ್ರಾಣಿ– ಪಕ್ಷಿಗಳಿಂದಲೂ ಕಲಿಯುವುದು ಸಾಕಷ್ಟಿದೆ ಎಂದು ವಚನದಲ್ಲಿ ಹೇಳಿದ್ದಾರೆ. ಅವರ ಅಂಕಿತ ನಾಮ ಕಲಿದೇವರ ದೇವಾ ಎಂದಾಗಿತ್ತು. ಇಂತಹ ವಚನಕಾರ ನಮ್ಮಲ್ಲಿ ಜನಿಸಿದ್ದು ಹೆಮ್ಮೆಯ ಸಂಗತಿ’ ಎಂದರು.
‘ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದ ಅವರು ಆಚಾರ-ವಿಚಾರಗಳನ್ನು ಪಾಲಿಸುವ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ವಚನಗಳ ಮೂಲಕ ತಿದ್ದಲು ಯತ್ನಿಸಿದರು. ನಿಷ್ಠುರ ವಚನಕಾರರಲ್ಲಿ ಒಬ್ಬರಾಗಿದ್ದರು. ಮನುಜ ಭಕ್ತಿಯೇ ನಿಜವಾದ ಭಕ್ತಿ ಎಂದು ತಿಳಿಸಿದರು.
ಮನುಷ್ಯ ಬದುಕುವ ರೀತಿಯಿಂದ ಬೇರೆಯವರಿಗೆ ತೊಂದರೆ ಆಗಬಾರದೆಂಬ ಸೂಕ್ಷ್ಮ ಸಂದೇಶ ಸಾರಿದವರು’ ಎಂದು ಸ್ಮರಿಸಿದರು. ‘ವೃತ್ತಿಯಲ್ಲಿ, ಶರಣರ ಬಟ್ಟೆ ತೊಳೆಯವ ಕಾಯಕದಲ್ಲಿ ತೊಡಗಿಸಿಕೊಂಡು 353ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಶರಣ. ಕಲ್ಯಾಣದಲ್ಲಿ ಕ್ರಾಂತಿ ಉಂಟಾಗಿ ಇನ್ನೇನು ವಚನಗಳು ನಾಶ ಹೊಂದುತ್ತವೆ ಎಂಬ ಸಂದರ್ಭದಲ್ಲಿ ಚನ್ನಬಸವಣ್ಣನವರಿಗೆ ಬೆನ್ನಲುಬಾಗಿ ನಿಂತು ಇತರ ಎಲ್ಲ ಶರಣರ ವಚನಗಳ ಮೂಟೆಗಳನ್ನು ಉಳವಿಗೆ ಹೊತ್ತು ತಂದು, ಸಂರಕ್ಷಿಸುವ ಕಾರ್ಯ ಮಾಡಿದ ಶೂರ’ ಎಂದು ಶ್ಲಾಘಿಸಿದರು.
ತಾಲೂಕಾ ಮಡಿವಾಳ ಸಂಘದ ಅಧ್ಯಕ್ಷ ಮಹಾದೇವ ಗಡೆದ(ಅಗಸರ) ಮಾತನಾಡಿ `ಮಾಚಿದೇವ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ನೋವುಗಳನ್ನು ವಚನಗಳ ಮೂಲಕ ಬಿಚ್ಚಿಟ್ಟರು. ಈ ಮೂಲಕ 12ನೇ ಶತಮಾನದಲ್ಲಿ ಮಹಾನ್ ಸಮಾಜ ಸುಧಾರಕರಾಗಿ ಹೊರಹೊಮ್ಮಿದರು. ಅವರ ವಚನಗಳ ಆಶಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಿರೆಸ್ತಾದಾರ ಏ ಎಚ್ ಬಳರುಗಿ ವಹಿಸಿದ್ದರು ಮಡಿವಾಳ ಸಮಾಜದ ಸುಖಾರಾಮ ಕಟ್ಟಿಮನಿ ಶೇಖು ಅಗಸರ ರಾಮಚಂದ್ರ ಕಟ್ಟಿಮನಿ ಸಂಗು ಮಡಿವಾಳರ ಬಸವರಾಜ ಕಟ್ಟಿಮನಿ ಸುರೇಶ ಮಡಿವಾಳ ಪಂಡರಿ ಕಟ್ಟಿಮನಿ ಸಂಗಮೇಶ ಗಡೆದ ಲಕ್ಷ್ಮಣ ಕಟ್ಟಿಮನಿ ಬಸವರಾಜ ಅಗಸರ ಹುಚ್ಚಪ್ಪ ಮಡಿವಾಳ ಇದ್ದರು. ಮಂಜುನಾಥ ಹಳ್ಳೂರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಮಖಬೂಲ ಸಾಬ ದಾಪೆದಾರ ನಿರೂಪಿಸಿದರು.