ಬಲ್ಲವರ ಸಂಗದಿಂದ ಬಂಧನದಿಂದ ಮುಕ್ತಿ: ಬಸವಪ್ರಸಾದ ಶ್ರೀಗಳು
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಜಮಖಂಡಿ: ಬಲ್ಲವರ, ಮಹಾನುಭಾವಿಗಳ ಹಾಗೂ ಅನುಭಾವಿಗಳ ಸಂಗದಲ್ಲಿದ್ದು ವಿಷಯಾಸಕ್ತಿಯನ್ನು ದೂರೀಕರಿಸಿ ಜ್ಞಾನಾಸಕ್ತಿ, ಭಕ್ತಿಯಾಸಕ್ತಿ ಬೆಳೆಸಿಕೊಂಡರೆ ಮಾತ್ರ ವಿಷಯಗಳ ಬಂಧನದಿಂದ ಮುಕ್ತಿ ಸಾಧ್ಯ. ಮುಕ್ತಿ ಎಂದರೆ ಪರಮಸುಖ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಬಸವಪ್ರಸಾದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಭಾನುವಾರ ನಡೆದ ಶ್ರೀಗುರುದೇವ ಸತ್ಸಂಗ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ‘ವಿಷಯಾಸಕ್ತ ಮನಸ್ಸಿಗೆ ಮುಕ್ತಿ ಯಾವಾಗ?’ ಎಂಬ ವಿಷಯ ಕುರಿತು ಅವರು ಆಶೀರ್ವಚನ ನೀಡಿದರು.
ವಿಷಯಗಳ ಜೊತೆಗೆ ಇರಬೇಕು. ಆದರೆ, ವಿಷಯಗಳ ಸ್ವರೂಪ ತಿಳಿದುಕೊಂಡು ಅವುಗಳಿಂದ ಪಾರಾಗಬೇಕು. ವಿಷಯಗಳ ದಾಹ ಕಡಿಮೆ ಆಗುವವರೆಗೆ ಮುಕ್ತಿ ಅಸಾಧ್ಯ. ದೇವನ ಸ್ಮರಣೆ ಮಾಡುವಾಗ ಬಹಿರ್ಮುಖವಾಗುವ ಇಂದ್ರಿಯಗಳನ್ನು ಅಂತರರ್ಮುಖ ಮಾಡಿಕೊಂಡರೆ ಮತ್ತು ಗುರುವಿನ ಕರುಣೆಯಾದರೆ ಮುಕ್ತಿ ಸಾಧ್ಯ ಎಂದರು.
ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಯೋಗಿಗಳು, ಶರಣರು, ವೇದಾಂತಿಗಳು, ಕಾಯಕಯೋಗಿಗಳು, ಗುರುಗಳು ತೋರಿದ ಸನ್ಮಾರ್ಗದಲ್ಲಿ ಸಾಗಿದರೆ ಮುಕ್ತಿ ಪಡೆಯಲು ಸಾಧ್ಯ ಎಂದರು.
ಧ್ಯಾನ ಮತ್ತು ಪ್ರಾಣಾಯಾಮ ಮಾಡಿದರೆ ಮನಸ್ಸಿನ ನಿಯಂತ್ರಣ ಸಾಧ್ಯ ಎಂದು ಯೋಗಿಗಳು ಹೇಳಿದ್ದಾರೆ. ಇಷ್ಟಲಿಂಗ ಪೂಜೆ ಮಾಡಿದರೆ ಮನಸ್ಸು ಲಿಂಗರೂಪ ತಾಳುತ್ತದೆ. ಮನಸ್ಸು ಭಾವ ಪ್ರವೇಶ ಮಾಡುತ್ತದೆ ಎಂದು ಶರಣರು ಹೇಳಿದ್ದಾರೆ. ನಾನು ಆತ್ಮಸ್ವರೂಪ, ಶಿವಸ್ವರೂಪ ಎಂಬ ಜ್ಞಾನ ಉಂಟಾದಾಗ ಮುಕ್ತಿ ಸಾಧ್ಯ ಎಂದು ವೇದಾಂತಿಗಳು ಹೇಳಿದ್ದಾರೆ. ಸತ್ಯಶುದ್ಧ ಕಾಯಕದಲ್ಲಿ ತೊಡಗಿದರೆ ಮುಕ್ತಿ ಸಾಧ್ಯ ಎಂದು ಕಾಯಕಯೋಗಿಗಳು ಪ್ರತಿಪಾದಿಸಿದ್ದಾರೆ ಎಂದರು.
ಮಹಾಪ್ರಸಾದದ ದಾಸೋಹ ಮಾಡಿದ ಆಲಬಾಳ ಗ್ರಾಮದ ಬಸಪ್ಪ ತೇಲಿ ದಂಪತಿಯನ್ನು ಸನ್ಮಾನಿಸಲಾಯಿತು. ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ(ಹಾರ್ಮೋನಿಯಂ), ರಾಮಚಂದ್ರ ಹೂಗಾರ(ತಬಲಾ), ಶೀಲಾ ಬೆಂಗಿ ಸಂಗಿತ ಸೇವೆ ಸಲ್ಲಿಸಿದರು. ಮುತ್ತು ಗೆದ್ದೆಪ್ಪನವರ ಸ್ವಾಗತಿಸಿದರು. ಪೃಥ್ವಿರಾಜ ಹೊನಗೌಡ ನಿರೂಪಿಸಿದರು.