ಜ್ಞಾನಭಾರತಿಯಲ್ಲಿ ಪ್ರೊ.ಬಿ.ಕೆ.ರವಿಯವರಿಗೆ ಸನ್ಮಾನ
ಬೆಂಗಳೂರು : ಜಾತಿ ವ್ಯವಸ್ಥೆ, ಶ್ರೇಣಿಕೃತ ವರ್ಗ, ಅಸಮಾನತೆ ಇರುವವರೆಗೂ ಗ್ರಾಮೀಣ ಭಾಗದ, ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರಿಗಿದೆ. ಸೇವೆಯಿಂದ ನಿವೃತ್ತಿಯಾದರೂ ಶಿಕ್ಷಕ ವೃತ್ತಿಯಿಂದ ಎಂದಿಗೂ ನಿವೃತ್ತಿ ಇಲ್ಲ ಎಂದು ಹಿರಿಯ ಪ್ರಾಧ್ಯಾಪಕ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬಿ.ಕೆ.ರವಿ ಅವರು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದಲ್ಲಿ ಪ್ರೊ. ಬಿ.ಕೆ.ರವಿಯವರು 35 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಹಿನ್ನೆಲೆ ಸಂವಹನ ವಿಭಾಗದ ವತಿಯಿಂದ ಜ್ಞಾನಭಾರತಿಯ ಎಂ.ವಿ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗ ಇಡೀ ದೇಶದಲ್ಲೇ ಪ್ರತಿಷ್ಠಿತ ವಿಭಾಗವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಟೆಲಿವಿಷನ್ ಶಿಕ್ಷಣ ಆರಂಭಿಸಿದ ಹೆಗ್ಗಳಿಗೆ ಸಂವಹನ ವಿಭಾಗಕ್ಕಿದೆ. ಅಲ್ಲದೇ ದೇಶದ ಪತ್ರಿಕೋದ್ಯಮ, ಮಾಧ್ಯಮ, ಚಿತ್ರರಂಗ ಕ್ಷೇತ್ರದ ಅಭಿವೃದ್ಧಿಗೆ ಸಂವಹನ ವಿಭಾಗದ ಕೊಡುಗೆ ಅಪಾರವಾಗಿದೆ. ಬೆಂವಿವಿ ಸಂವಹನ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ದೇಶದ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುವಿಗೆ ಒಬ್ಬ ಒಳ್ಳೆಯ ವಿದ್ಯಾರ್ಥಿ ಸಿಗುವುದೇ ಪುಣ್ಯ, ಆದರೆ ಈ ವಿಷಯದಲ್ಲಿ ನಾನು ಅದೃಷ್ಟವಂತ. ಇಂದು ಅನೇಕ ವಿದ್ಯಾರ್ಥಿಗಳು ಭಾರತದ ಮಾಧ್ಯಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಸಾಕಷ್ಟು ಹೆಮ್ಮೆ ಮತ್ತು ತೃಪ್ತಿ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
1975 ರಲ್ಲಿ ಸತ್ಯಜ್ಯೋತಿ ಎಂಬ ಪ್ರಾದೇಶಿಕ ಪತ್ರಿಕೆಯ ಮೂಲಕ ಮಾಧ್ಯಮ ಪ್ರವೇಶಿಸಿದೆ, ಆ ನಂತರ ಅನೇಕ ವಾರಪತ್ರಿಕೆ, ಪ್ರಜಾವಾಣಿ, ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. 80 ರ ದಶಕದ ರಾಜಕೀಯ ಬದಲಾವಣೆ, ಸಾಮಾಜಿಕ ಹೋರಾಟಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ಅನೇಕ ರಾಜಕಾರಣಿಗಳು, ನಾಯಕರು ಮುಖಂಡರು ಈ ವೃತ್ತಿ ಜೀವನದಲ್ಲಿ ಸಹಕಾರ, ಪ್ರೋತ್ಸಾಹ ನೀಡಿದ್ದಾರೆ. ಮೈಸೂರಿನ ದಿನಗಳಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದರು. ಲೋಹಿಯಾ,ಅಂಬೇಡ್ಕರ್ ಪುಸ್ತಕಗಳನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದರು, ಸಾಮಾಜಿಕ ಅಸಮಾನತೆ ಮತ್ತು ಹೋರಾಟವನ್ನು ಪರಚಯಿಸಿದರು" ಎಂದು ಹಿರಿಯ ರಾಜಕಾರಣಿಗಳ ಒಡನಾಟ ಮತ್ತು ಪತ್ರಿಕೋದ್ಯಮದ ದಿನಗಳನ್ನು ಮೆಲುಕು ಹಾಕಿದರು.
ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕನಾಗಿ ಅನೇಕ ಅದ್ಬುತ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ. ವಿದ್ಯಾರ್ಥಿಗಳ ಬದುಕು ರೂಪಿಸುವ ಪ್ರಾಧ್ಯಾಪಕ ಹುದ್ದೆಗೆ ಚಿರ ಋಣಿಯಾಗಿದ್ದೇನೆ. ಅಂಬೇಡ್ಕರರು ಸಂವಿಧಾನ ಕೊಡದಿದ್ದರೆ ಈ ದಿನ ನನ್ನಂತಹ ಹಿಂದುಳಿದ ವರ್ಗದ ಬಡವ ವೇದಿಕೆ ಮೇಲೂ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸೇವೆಯಿಂದ ಮಾತ್ರ ನಿವೃತ್ತನಾಗುತ್ತಿದ್ದು, ಶಿಕ್ಷಕನಾಗಿ ಸೇವೆ ಮುಂದುವರೆಯಲಿದೆ. ಜಾತಿ ವ್ಯವಸ್ಥೆ, ಶ್ರೇಣಿಕೃತ ವರ್ಗ, ಅಸಮಾನತೆ ಇರುವವರೆಗೂ ತಳ ಸಮುದಾಯವನ್ನು, ಶೋಷಿತ ವರ್ಗವನ್ನು ಮೇಲೆತ್ತುವ ಮತ್ತು ಆ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗವೇಕು. ಗ್ರಾಮೀಣ ಭಾಗದ, ಶೋಷಿತ ಸಮುದಾಯದಿಂದ ಬಂದತಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದೇವೆ, ಎಲ್ಲರೂ ಒಗ್ಗೂಡಿ ಅದನ್ನು ಸಾಕಾರಗೊಳಿಸಬೇಕು ಎಂದು ತಿಳಿಸಿದರು.
ಪ್ರೊ. ಬಿ.ಕೆ. ರವಿಯವರು ಸ್ಪಷ್ಟ ಗುರಿಯೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಖ್ಯಾತ ಪತ್ರಕರ್ತರನ್ನು ಮಾಧ್ಯಮ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪತ್ರಿಕೋದ್ಯಮವನ್ನು ಪ್ರಾಯೋಗಿಕವಾಗಿ, ವಸ್ತು ನಿಷ್ಠ, ನಿಷ್ಪಕ್ಷಪಾತವಾಗಿ ರೂಢಿಸಿಕೊಳ್ಳಬೇಕು ಎಂಬ ಮಾರ್ಗದರ್ಶನ ನೀಡಿದ್ದಾರೆ. ಸೇವೆಯಿಂದ ನಿವೃತ್ತಿ ಬಳಿಕವೂ ಪತ್ರಿಕೋದ್ಯಮ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಸೇವೆ ಮುಂದುವರೆಯಲಿ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ತಿಳಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೆ ರವಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬೆಂವಿವಿ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವ ಶೇಕ್ ಲತೀಫ್, ನ್ಯೂಸ್‌ಫರ್ಸ್ಟ್ ವಾಹಿನಿಯ ಸಿಇಓ ಎಸ್. ರವಿಕುಮಾರ್, ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಶೈಲಶ್ರೀ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.