ಭಗತ್ ಸಿಂಗ್ ಚಿಂತನೆಗಳು ಯುವಕರಿಗೆ ಮಾರ್ಗದರ್ಶಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಭಗತ್ ಸಿಂಗ್ ಅವರ ಹೋರಾಟ-ತ್ಯಾಗ- ಬಲಿದಾನ-ಚಿಂತನೆಗಳು ಇಂದಿನ ಯುವಜನರ ಬದುಕಿಗೆ ಮಾರ್ಗದರ್ಶಿ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಗ್ರಂಥಾಲಯದಲ್ಲಿ ಶನಿವಾರದಂದು ಭಗತಸಿಂಗ್ ಅವರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಾನವನಿಂದ ಮಾನವನ ಶೋಷಣೆ ತಡೆಗಟ್ಟುವ, ಅಸಮಾನತೆಯನ್ನು ತೊಡೆದು ಹಾಕುವ ಸಮಾಜವಾದಿ ಭಾರತ ನಿರ್ಮಾಣ ಭಗತ್ ಸಿಂಗ್ ಕನಸಾಗಿತ್ತು. ಭಗತ್ ಸಿಂಗ್ ಅವರ ಆಲೋಚನೆಗಳು, ಅವರ ಕ್ರಾಂತಿಕಾರಿ ಮನೋಭಾವ ಹಾಗೂ ನ್ಯಾಯ-ಸ್ವಾತಂತ್ರ‍್ಯಕ್ಕಾಗಿನ ಅವರ ನಿರಂತರ ಬದ್ಧತೆ ಇಂದಿಗೂ ಪ್ರೇರಣಾದಾಯಕ ಎಂದು ಹೇಳಿದರು. ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಕೇವಲ ತನಗಾಗಿ ಬದುಕದೇ ಇಡೀ ಜೀವನವನ್ನೇ ದೇಶದ ವಿಮೋಚನೆಗೋಸ್ಕರ ಮೀಸಲಿಟ್ಟ ಭಗತ್ ಸಿಂಗ್ ಇಂದು ನಮಗೆ ಆದರ್ಶವಾಗಬೇಕಾಗಿದೆ ಎಂದು ಹೇಳಿದರು.
ಇಂಡಿ ಸರಕಾರಿ ಐಟಿಐ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಪರಶುರಾಮ ರಜನಿಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನರ ನೈತಿಕತೆಯನ್ನು ನಾಶ ಮಾಡಲು ಅಶ್ಲೀಲ ಸಿನಿಮಾ, ಸಾಹಿತ್ಯ, ಮಾದಕ ದ್ರವ್ಯ, ಮದ್ಯಪಾನ, ವ್ಯಾಪಕವಾಗುತ್ತಿದೆ. ಇಂದಿನ ಯುವ ಪೀಳಿಗೆ ಭಗತ್ ಸಿಂಗ್ ಅವರ ಚಿಂತನೆಗಳನ್ನು ಇನ್ನಷ್ಟು ಮನನ ಮಾಡಿಕೊಳ್ಳುತ್ತಾ ಇಂದಿನ ಸಮಸ್ಯೆಗಳನ್ನು ವೈಚಾರಿಕವಾಗಿ, ನೈತಿಕತೆಯೊಂದಿಗೆ ಪರಿಹರಿಸಿ ಕೊಳ್ಳಬೇಕು ಎಂದು ಹೇಳಿದರು.
ಅನಂದ ಗಂಗನಳ್ಳಿ, ಚನ್ನಪ್ಪ ಹಂಡಿ, ಶರಣಬಸು ಹಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.